Showing posts sorted by relevance for query ಯಕ್ಷ ಕಲಾ ಕೌಸ್ತುಭ. Sort by date Show all posts
Showing posts sorted by relevance for query ಯಕ್ಷ ಕಲಾ ಕೌಸ್ತುಭ. Sort by date Show all posts

Tuesday, May 12, 2026

ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

 ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡ ಹಾಗೂ ಯಕ್ಷಗಾನ ಕುರಿತಾಗಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಎಂಎಎಚ್‌ಇ ʼಮಾಹೆʼ) ಟಿಎ ಪೈ ಮ್ಯಾನೇಜ್‌ ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಬೆಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಸುಂದರವಾದ ಸಾಕ್ಷ್ಯಚಿತ್ರವೊಂದನ್ನು (ಡಾಕ್ಯಮೆಂಟರಿ) ಸಿದ್ಧ ಪಡಿಸಿದ್ದಾರೆ.

ಈ ಸಾಕ್ಷ್ಯ ಚಿತ್ರದಲ್ಲಿ ಯಕ್ಷಗಾನ, ಅದರ ಹಾಡುಗಾರಿಕೆ, ಬಣ್ಣಗಾರಿಕೆ ವೇಷಭೂಷಣ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇಂಗ್ಲಿಷಿನಲ್ಲಿ  ವಿವರಿಸಿದ್ದಾರೆ. ಈ ಸಾಕ್ಷ್ಯ ಚಿತ್ರವನ್ನು ಇಲ್ಲಿ ನೋಡಬಹುದು.

ಎರಡನೇ ತಂಡ:
ಈ ಮಧ್ಯೆ, ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್‌ 26ರಂದು ಪ್ರಾರಂಭವಾದ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡವು ತನ್ನ ಎರಡನೇ ತಂಡಕ್ಕೆ ತರಬೇತಿ ಆರಂಭಿಸಲು ಸಜ್ಜಾಗಿದೆ. (ಚಿತ್ರಗಳ   ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ).

ಕೇವಲ ಆರು ತಿಂಗಳ ಅವಧಿಯಲ್ಲಿ ಯಕ್ಷಗುರು ಉಮೇಶ ರಾಜ್‌ ಅವರಿಂದ ಯಕ್ಷಗಾನ ಕಲಿತ ಮಕ್ಕಳು ಜಕ್ಕೂರಿನ ʼಸುಗಿ-ಹುಗ್ಗಿʼಯಲ್ಲಿ ನೀಡಿದ ಪ್ರದರ್ಶನವೂ ಸೇರಿದಂತೆ ಐದು ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ʼಅಭಿಮನ್ಯು ಕಾಳಗʼ, ʼಭಾರ್ಗವ ವಿಜಯʼ ಮತ್ತು ʼಲವ ಕುಶ ಕಾಳಗʼ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನರಂಜಿಸಿದ್ದಾರೆ.

ಇದೀಗ ಜೂನ್‌ ಮೊದಲ ವಾರದಿಂದ ಆರಂಭವಾಗಲಿರುವ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡಕ್ಕೆ ಸೇರ್ಪಡೆಯಾಗಬಯಸುವವರು ಯಕ್ಷಗುರು ಉಮೇಶರಾಜ್‌ ಅವರನ್ನು ದೂರವಾಣಿ ಸಂಖ್ಯೆ 9663671591 ಅಥವಾ 9606981591 ಮೂಲಕ ಸಂಪರ್ಕಿಸಬಹುದು ಎಂದು ಹೇಳಿಕೆ ತಿಳಿಸಿದೆ.



ಯಕ್ಷಗಾನ ಕುರಿತ ವಿವರಗಳಿಗೆ ನೋಡಿ: ಈ  ಪರ್ಯಾಯ ವೆಬ್‌ ಸೈಟಿನ ʼಯಕ್ಷಗಾನ/ತಾಳಮದ್ದಳೆʼ ಪುಟ.

Sunday, February 8, 2026

ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

 ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವವನ್ನು ೨೦೨೬ ಫೆಬ್ರುವರಿ ೦೮ರ ಮಾಘ ಬಹುಳ ಸಪ್ತಮಿಯಂದು ಶ್ರದ್ಧಾ ಭಕ್ತಿಯೊಂದಿಗೆ ಸಡಗರದಿಂದ ನೆರವೇರಿಸಲಾಯಿತು.

ದೇವರ ಬಲವರ್ಧನೆ ಹಾಗೂ ಭಕ್ತರ ಕ್ಷೇಮಾಭಿವೃದ್ಧಿಗಾಗಿ ಪಂಚ ಹೋಮಗಳನ್ನು ಋತ್ವಿಜ ಶ್ರೀ ಶ್ರೀಧರ್‌ ಭಟ್‌ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅದಕ್ಕೂ ಮುನ್ನ ಬೆಳಗ್ಗೆ ಎಲ್ಲ ದೇವರಿಗೆ ಕ್ಷೀರಾಭಿಷೇಕವನ್ನು ಮಾಡಲಾಯಿತು.


ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಆಂಜನೇಯ, ನವಗ್ರಹಗಳು ಮತ್ತು ನಾಗರಾಜರನ್ನು ಆವಾಹಿಸಿ ಅವರ ಪೂಜೆಯೊಂದಿಗೆ ಮಹಾಗಣಪತಿಗಾಗಿ ಅಥರ್ವಶೀರ್ಷ ಹೋಮ, ವೆಂಕಟೇಶ್ವರನಿಗಾಗಿ ಶ್ರೀ ವೆಂಕಟೇಶ್ವರ ಮೂಲ ಮಂತ್ರ ಹೋಮ, ಅಭಯ ಆಂಜನೇಯನಿಗಾಗಿ ಶ್ರೀ ಆಂಜನೇಯ ಮೂಲಮಂತ್ರ ಹೋಮ, ಆದಿತ್ಯಾದಿ ನವಗ್ರಹರಿಗಾಗಿ ನವಗ್ರಹ ಹೋಮ, ಸುಬ್ರಹ್ಮಣ್ಯ- ನಾಗರಾಜನಿಗೆ ಸರ್ಪ ಸೂಕ್ತ ಹೋಮ ಹಾಗೂ ದೇವರ ಬಲವೃದ್ಧಿಗಾಗಿ ಕಲಾ ಹೋಮವನ್ನು ನೆರವೇರಿಸಲಾಯಿತು.

ಹೋಮದ ಬಳಿಕ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಮುನಿರಾಜು ಅವರು ಅಲಂಕಾರ ಹಾಗೂ ರಾತ್ರಿಯ ಪ್ರಸಾದ ಸೇವೆ, ಶ್ರೀ ಎಚ್.ವಿ. ಉದಯಶಂಕರ, ನಾಗರಾಜ್‌ ಕೆ.ಎಂ., ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಭಕ್ತರು ಭಾರೀ ಸಂಖ್ಯೆಯಲ್ಲಿ ಹೋಮ ಕಲಾಪದಲ್ಲಿ ಪಾಲ್ಗೊಂಡರು.

ಯುವ ನಾಯಕ ಶ್ರೀ ಶಿವಕುಮಾರ್‌, ವೇಣುಗೋಪಾಲ್‌, ಯಕ್ಷ ಕಲಾ ಕೌಸ್ತುಭ ತಂಡದ ಕಲಾವಿದ ಮಕ್ಕಳು ಅವರ ಪಾಲಕರು ಸೇರಿದಂತೆ ಆಸುಪಾಸಿನ ಬಡಾವಣೆಯಗಳಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಯಕ್ಷ ಕಲಾ ಕೌಸ್ತುಭ ತಂಡದ ಸದಸ್ಯರು ಶ್ರೀ ಉಮೇಶರಾಜ್‌ ಮಂದಾರ್ತಿ ಅವರ ನೇತೃತ್ವದಲ್ಲಿ ಗಣಪತಿ ಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಕಳಗಟ್ಟಿಸಿದರು.

ವಾರ್ಷಿಕೋತ್ಸವ ಸಡಗರದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


Thursday, January 29, 2026

ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

 ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಚೊಕ್ಕನಹಳ್ಳಿಯಲ್ಲಿ ೨೦೨೫ ಜನವರಿ ೨೫ರ ಭಾನುವಾರ ಹಿಂದೂ ಸಮಾಜೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದಿಂದ ʼಭಾರ್ಗವ ವಿಜಯʼ ಯಕ್ಷಗಾನ ಕಾರ್ಯಕ್ರಮ ನಡೆಯಿತು.






ಹಿಮ್ಮೇಳದಲ್ಲಿ ಭಾಗವತರು:ಉಮೇಶ ರಾಜ್ ಮಂದಾರ್ತಿ
ಮದ್ದಳೆ: ನರಸಿಂಹ ಆಚಾರ್ ಕೂರಾಡಿ 
ಚೆಂಡೆ:‌ ಸುಬ್ರಹ್ಮಣ್ಯ ಸಾಸ್ತಾನ
ವೇಷಭೂಷಣ: ಯಕ್ಷ ಕಲಾ ಕೌಸ್ತುಭ ಬೆಂಗಳೂರು
ಉದಯ ಮಂದಾರ್ತಿ,
ಗುರುರಾಜ್‌  ಬಿಲ್ಲಾಡಿ ನಡೆಸಿಕೊಟ್ಟರು.

ಮುಮ್ಮೇಳದಲ್ಲಿ ಪರಶುರಾಮ – ಶಿವಾಂಷ್
ಕಾರ್ತ್ಯವೀರ್ಯಾರ್ಜನ – ಆದ್ಯ ಕಶ್ಯಪ್
ಕಾಲಾಜ್ಞ – ಆದ್ಯ
ರೇಣುಕೆ -ಆದ್ಯ ಶ್ರೀವಲ್ಲಿ
ಜಮದಗ್ನಿ – ಉಮಾದೇವಿ
ಶತ್ರಜಿತು – ಪುಣ್ಯ

ರಂಗಸ್ಥಳಕ್ಕೆ ಕಳೆ ಕಟ್ಟಿದರು.

ಅದಕ್ಕೂ ಮುನ್ನ ಜನವರಿ ೨೪ರ ಭಾನುವಾರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ತಂಡಕ್ಕಾಗಿ ತಂದ ಹೊಸ ಕಿರೀಟಗಳ ಪೂಜೆಯೂ ನಡೆಯಿತು.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ಯಕ್ಷಗಾನ ಭಾರ್ಗವ ವಿಜಯದ ವಿಡಿಯೋಗಳು ಮೇಲಿವೆ. ಯಕ್ಷಗಾನ/ ತಾಳಮದ್ದಳೆಯ ಹೆಚ್ಚಿನ ಸುದ್ದಿಗಳಿಗಾಗಿ  ಮೇಲಿನ ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ನೀಡಿ. 

Tuesday, June 30, 2026

ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

 ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

ಯಕ್ಷಗಾನ ತರಗತಿ ದ್ವಿತೀಯ ತಂಡ ಪ್ರಾರಂಭೋತ್ಸವ + ಸತ್ಯನಾರಾಯಣ ಪೂಜಾ

ಭಕ್ತಿ ಶ್ರದ್ಧೆಯೊಂದಿಗೆ ನಡೆಯುವ ದೇವಾರಾಧನೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇಂಬುಕೊಡುವ ಕಾರ್ಯಕ್ರಮಗಳು ದೇವಾಲಯಕ್ಕೆ ವಿಶೇಷ ಕಳೆಯನ್ನು ನೀಡುತ್ತವೆ.

ಗಣೇಶೋತ್ಸವ, ವಾರ್ಷಿಕೋತ್ಸವ, ಜಾತ್ರೆ ಇವುಗಳೆಲ್ಲ ದೇವಸ್ಥಾನಕ್ಕೆ ವಿಶೇಷ ಕಳೆಯನ್ನು ತಂದುಕೊಡುವ ವಿಶೇಷ ಸಂದರ್ಭಗಳು. ಹಾಗೆಯೇ ಇಂತಹ ಸಂದರ್ಭಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಿಶೇಷ ಸಂದರ್ಭಗಳನ್ನು ಇನ್ನಷ್ಟು ಸ್ಮರಣೀಯವನ್ನಾಗಿ ಮಾಡುತ್ತವೆ.

ದೇವಸ್ಥಾನಗಳಲ್ಲಿ ಇಂತಹ ಸಾಂಸ್ಕತಿಕ ಚಟುವಟಿಕೆಗೆ ಒದಗಿ ಬರುವ ಪ್ರೋತ್ಸಾಹ ಇನ್ನೂ ವಿಶೇಷವಾದದ್ದು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಈ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸುತ್ತಿದೆ.

ಪ್ರತಿ ಮಾಸವೂ ಸತ್ಯ ನಾರಾಯಣ ಪೂಜೆ ಮತ್ತು ಸಂಕಷ್ಟಿ ಪೂಜೆಯನ್ನು ನಿರಂತರವಾಗಿ ನೆರವೇರಿಸುತ್ತಾ ಬಂದಿರುವುದರ ಜೊತೆಗೆ ಕಳೆದ ಎಂಟು ತಿಂಗಳುಗಳಿಂದ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಆಸಕ್ತರಿಗೆ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಕಲಿಸಿಕೊಡುವ ಕೈಕಂಕರ್ಯಕ್ಕೆ ನೀರೆಯುತ್ತಾ ಬಂದಿದೆ.

ಈ ತಂಡದ ಮೂಲಕ ಯಕ್ಷಗಾನ ಕಲಿತ ಮಕ್ಕಳು, ಮಹಿಳೆಯರು ಈ ಅವಧಿಯಲ್ಲಿ ಮೂರು ಯಕ್ಷಗಾನ ಪ್ರದರ್ಶನಗಳನ್ನೂ ಯಶಸ್ವಿಯಾಗಿ ನೀಡಿದ್ದಾರೆ. ಇದೀಗ ತಂಡವು ಯಕ್ಷಗಾನ ಕಲಿಯಬಯಸಿರುವ ಎರಡನೇ ತಂಡಕ್ಕೆ ತರಗತಿಗಳನ್ನೂ ಆರಂಭಿಸಿದೆ.

೨೦೨೬ ಜೂನ್‌ ೨೮ರ ಭಾನುವಾರ ಎರಡನೇ ತಂಡದ ಯಕ್ಷಗಾನ ತರಗತಿಯ ಆರಂಭೋತ್ಸವ ʼಬಾಲಾಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಕಿರೀಟ ಪೂಜೆಯೊಂದಿಗೆ ಜರುಗಿತು. ಯಕ್ಷಗಾನ ವಿದ್ಯಾರ್ಥಿಗಳು, ಪೋಷಕರು, ಯಕ್ಷ ಕಲಾ ಕೌಸ್ತುಭ ಕುಟುಂಬದ ಸರ್ವ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮರುದಿನ ೨೦೨೬ ಜೂನ್‌ ೨೯ರ ಸೋಮವಾರ ದೇವಸ್ಥಾನದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಈ ಎರಡೂ ಕಾರ್ಯಕ್ರಮಗಳ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


Sunday, March 29, 2026

ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ

 ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ

ಮುಗಿಲೆತ್ತರಕ್ಕೆ ಚಾಚಿದ ಅಪಾರ್ಟ್‌ಮೆಂಟುಗಳು, ಬೃಹತ್‌ ಐಟಿ ಕಂಪೆನಿಗಳು. ಮಧ್ಯೆ ಮಧ್ಯೆ ಅಂಕುಡೊಂಕಿನ ಸಿಮೆಂಟ್‌ ರಸ್ತೆಗಳು. ಅವುಗಳ ಬದಿಯಲ್ಲಿ ಹಸಿರಿಗಾಗಿ ನೆಟ್ಟ ಗಿಡಗಳು. ಎಲ್ಲಿ ನೋಡಿದರೂ ಬಹುತೇಕ ಹಿಂದಿ ಭಾಷೆಯಲ್ಲಿ ಇಲ್ಲವೇ ಇಂಗ್ಲೀಷಿನಲ್ಲೇ ಮಾತನಾಡುವ ಮಂದಿ.

ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿ.

೨೦೨೬ ಮಾರ್ಚ್‌ ೨೭ರ ರಾಮನವಮಿಯ ದಿನ. ಇಲ್ಲಿ ರಾಮೋತ್ಸವ ಸಡಗರ. ಭಜನೆ, ನೃತ್ಯ, ಹಾಡುಗಳ ಸಂಭ್ರಮ. ಇವೆಲ್ಲದರ ಮಧ್ಯೆ ಅಲ್ಲಿದ್ದ ಎಲ್ಲರನ್ನೂ ಸೂಜಿಗಲ್ಲಿನಂತೆ ಗಮನ ಸೆಳೆದದ್ದು, ಚೆಂಡೆ- ಮದ್ದಳೆಯ ಸದ್ದು, ಯಕ್ಷಗಾನದ ನೃತ್ಯ, ಭಾಗವತರ ಕಂಚಿನ ಕಂಠದ ಹಾಡುಗಳು.

ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ಅಭ್ಯಾಸ ನಡೆಸುತ್ತಿದ್ದ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು, ಅವರ ಅಮ್ಮಂದಿರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದು ಸಂಭ್ರಮದೊಂದಿಗೆ ಈ ಯಕ್ಷಗಾನ ಪ್ರದರ್ಶನ ನೀಡಿದವರು.

ಅವರು ಪ್ರದರ್ಶಿಸಿದ್ದು ರಾಮಾಯಣದ ಉತ್ತರ ಕಾಂಡದಲ್ಲಿ ಬರುವ ʼಲವ ಕುಶ ಕಾಳಗʼದ ಪ್ರಸಂಗ. ಈ ಪ್ರಸಂಗದ ವಿವರವನ್ನು ಸಂಘಟಕರ ಜೊತೆಗೆ ತಂಡದ ಸದಸ್ಯರೇ ಆದ ಶಿವಾಂಶ್‌ ಮತ್ತು ಉಮಾ ದೇವಿ ಎನ್.‌ ಅವರು ಹಿಂದಿ ಮತ್ತು ಇಂಗ್ಲಿಷಿನಲ್ಲಿ ವಿವರ ನೀಡಿದರು.

ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರ ನಿರ್ದೇಶನದಲ್ಲಿ ಶ್ರೀರಾಮನಾಗಿ ಉಮಾದೇವಿ ಎನ್,
ಸೀತಾಮಾತೆಯಾಗಿ ಅರ್ಚನಾ ಬಂಗೇರ, ಲವಕುಮಾರನಾಗಿ ಆದ್ಯಾ ಶ್ರೀವಲ್ಲಿ, ಕುಶಕುಮಾರನಾಗಿ ಆದ್ಯ ಎಂ ಕಶ್ಯಪ್, ಶತ್ರುಘ್ನನಾಗಿ ಆದ್ಯ ಭಟ್  ಮತ್ತು ವಾಲ್ಮೀಕಿ ಮಹರ್ಷಿಯಾಗಿ ಪ್ರಣೀತಾ ರೈ ಮಿಂಚಿದರು.

ವೆಂಕಟೇಶ್ ಪ್ರಭು ಅವರು ಮದ್ದಳೆ,  ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಚೆಂಡೆಯೊಂದಿಗೆ ಉಮೇಶರಾಜ್‌ ಅವರಿಗೆ ಸಾಥ್‌ ನೀಡಿದರು. ಚೌಕಿಯಲ್ಲಿ ಹಲವು ತಾಸುಗಳ ಮೊದಲೇ ಬಣ್ಣ ಹಚ್ಚಿಕೊಂಡು, ವೇಷಭೂಷಣ ಧರಿಸಿ ಸಿದ್ದರಾಗುವಲ್ಲಿ ಪ್ರಸನ್ನ ಮಯ್ಯ ಮತ್ತು ಉಮೇಶ ಮಂದಾರ್ತಿ ಸಹಕರಿಸಿದರು.

ಉಮೇಶ ರಾಜ್‌ ಮಂದಾರ್ತಿ ಅವರು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದಾರೆ.

ರಂಗಸ್ಥಳದ ಸಮೀಪ ʼಚೌಕಿʼಯಲ್ಲಿ ಮಕ್ಕಳು ವೇಷಭೂಷಣ ತೊಟ್ಟುಕೊಳ್ಳುತ್ತಿದ್ದ ಸಡಗರದ ಚಿತ್ರಗಳು, ಚೌಕಿ ಪೂಜೆಯ ವಿಡಿಯೋ ಸೇರಿದಂತೆ ʼಲವ ಕುಶ ಕಾಳಗʼದ ಎರಡು ಭಾಗಗಳು ಇಲ್ಲಿವೆ.

ಮೇಲಿನ ಮತ್ತು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡುವ ಮೂಲಕ ಈ ಯಕ್ಷಗಾನ ಪ್ರಸಂಗವನ್ನು ಪೂರ್ತಿಯಾಗಿ ಇಲ್ಲಿ ವೀಕ್ಷಿಸಿ.

ಅಥವಾ ಈ ವೆಬ್‌ ಸೈಟಿನಲ್ಲಿ ಮೇಲಿರುವ ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ಕೊಡಿ.

Saturday, October 18, 2025

ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ

 ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್‌ 26ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿಗಳು ಆರಂಭವಾಗಲಿವೆ.
ತರಗತಿಗಳು ನವೆಂಬರ್‌ 26ರಿಂದ ಪ್ರತೀ ಭಾನುವಾರ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ನಡೆಯಲಿವೆ.

ಯಕ್ಷಗಾನವು ಕರ್ನಾಟಕದ ಪರಂಪರಾಗತ ಹೆಮ್ಮೆಯ ಶ್ರೀಮಂತ ಕಲೆ. ಇದನ್ನು ಕಲಿಯಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಉಮೇಶ್‌ ರಾಜ್‌ ಮಂದಾರ್ತಿ (ಫೋನ್‌ ನಂಬರ್:‌9663671591) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಯಕ್ಷ ಕಲಾ ಕೌಸ್ತುಭ ಗುರುಗಳು ಮಾಗಡಿ ರಸ್ತೆ ಹುಲಿಯೂರು ದುರ್ಗದ ದೇವ ಪಟ್ಟಣ ಶ್ರೀವಿದ್ಯಾ ಚೌಡೇಶ್ವರಿ ದೇವಾಲಯದಲ್ಲಿ ನೀಡಿದ ಯಕ್ಷಗಾನ ಸೇವೆ ಒಂದರ ಝಲಕ್‌ ಇಲ್ಲಿದೆ.

Sunday, October 26, 2025

ಯಕ್ಷಗಾನ ತರಗತಿ ಶುಭಾರಂಭ

 ಯಕ್ಷಗಾನ ತರಗತಿ ಶುಭಾರಂಭ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೨೬ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿ ಶುಭಾರಂಭಗೊಂಡಿತು.


ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯಕ್ಷಗಾನ ಗುರು ಶ್ರೀ ಉಮೇಶ ರಾಜ್‌ ಮಂದಾರ್ತಿ ಮತ್ತು ಅವರ ತಂಡದವರಿಂದ ನಡೆದ ಗಣಪತಿ ಸ್ತುತಿಯನ್ನು ನೆರವೇರಿಸಿದರು.
ಗಣಪತಿ ಸ್ತುತಿಯ ಬಳಿಕ ದೀಪ ಪ್ರಜ್ಞಲನೆ, ಚೌಕಿ ಗಣೇಶ ಸ್ತುತಿ ನಡೆಯಿತು.

ಶ್ರೀ ರಾಜೇಶ ಹೆಗಡೆ ಅವರು ಯಕ್ಷಗಾನದ ಮಹತ್ವದ ಬಗ್ಗೆ ವಿವರಿಸಿದರು. ಶ್ರೀ ಚೌಡರೆಡ್ಡಿ ಅವರು ದೇವಸ್ಥಾನದಲ್ಲಿ ಯಕ್ಷಗಾನ ಕಲಿಯಲು ಬರುವ ಎಲ್ಲರಿಗೂ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಎಲ್ಲ ಸಹಕಾರವನ್ನು ನೀಡುವ ಭರವಸೆ ಕೊಟ್ಟರು.
ಶ್ರೀ ಉಮೇಶರಾಜ್‌ ಮಂದಾರ್ತಿ ಅವರು ಯಕ್ಷಗಾನವನ್ನು ಏಕೆ ಕಲಿಯಬೇಕು ಮತ್ತು ಕಲಿಸಬೇಕು ಎಂಬ ಬಗ್ಗೆ ವಿವರಿಸಿದರು. ಯಕ್ಷಗಾನದ ಪ್ರಾಥಮಿಕ ತರಬೇತಿಯನ್ನೂ ನೀಡಿದರು.

ಯಕ್ಷ ಕಲಾ ಕೌಸ್ತುಭ ತಂಡದ ಚೆಂಡೆ ವಾದಕ ಸುಬ್ರಹ್ಮಣ್ಯ
 ಸಾಸ್ತಾನ, ಮದ್ದಳೆ ವಾದಕ ನರಸಿಂಹ ಆಚಾರ್ಯ ಹಾಗೂ ಉದಯ ಮಂದಾರ್ತಿ ಅವರು ಹಾಜರಿದ್ದರು.
ಡಾಲರ್ಸ್‌ ಕಾಲೋನಿ, ಹೆಣ್ಣೂರು ರಸ್ತೆ, ಸಾತನೂರು ಸೇರಿದಂತೆ ಹೆಗಡೆ ನಗರದ ಆಸುಪಾಸಿನ ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ಶ್ರೀ ರಾಜೇಶ ಕಮಲಾಕರ ಹೆಗಡೆ, ಟ್ರಸ್ಟಿಗಳಾದ ಶ್ರೀ ಮುನಿರಾಜು, ಸುಗುಣನ್‌, ನೆತ್ರಕೆರೆ ಉದಯಶಂಕರ ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.
ಚೌಕಿ ಪೂಜೆಯ ಸಂದರ್ಭದ ಗಣಪ ಸ್ತುತಿ ಇಲ್ಲಿದೆ:

ಯಕ್ಷಗಾನ ಪ್ರಾಥಮಿಕ ಅಭ್ಯಾಸದ ಒಂದು ವಿಡಿಯೋ ಕೆಳಗಿದೆ.

ದೇವರ ಸನ್ನಿಧಿಯಲ್ಲಿ ನಡೆದ ಗಣಪತಿಸ್ತುತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಯೂ ಟ್ಯೂಬ್‌ ವಿಡಿಯೋ ನೋಡಲು ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/sbWyM8KaKX8

ಯಕ್ಷಗಾನ ಮಂಗಲ ಸಂದರ್ಭದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಅಥವಾ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/206hUkGzjVQ

ಇನ್ನಷ್ಟು ವಿಡಿಯೋಗಳು ಪರ್ಯಾಯ5 ಯೂಬ್‌ ಚಾನೆಲ್‌ನಲ್ಲಿಯೂ ಮೂಡಿ ಬರಲಿವೆ.

ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಯಕ್ಷಗಾನ ತರಗತಿಗಳು ನಡೆಯಲಿದ್ದು, ಆಸಕ್ತರು ಶ್ರೀ ಉಮೇಶರಾಜ್‌ ಮಂದಾರ್ತಿ (ಫೋನ್:‌ 9663671591)  ಅವರನ್ನು ಸಂಪರ್ಕಿಸಬಹುದು.

ಯಕ್ಷಗಾನ ಕುರಿತ ಇನ್ನಷ್ಟು ವಿಷಯಗಳಿಗೆ- ಮೇಲಿನ ಯಕ್ಷಗಾನ/ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ ಅಥವಾ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

Sunday, June 21, 2026

ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

 ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದು.


ಯಕ್ಷಗಾನ ಕಲಾವಿದರು ತಮ್ಮ ವೇಷ ಧರಿಸುವುದನ್ನು ಸ್ವತಃ ಮಾಡುತ್ತಾರೆ, ಅದು ಅಂದವಾಗಿ ಬಣ್ಣ ಬಳಿದುಕೊಂಡು, ವೇಷಭೂಷಣ ತೊಟ್ಟುಕೊಳ್ಳುವುದರಿಂದ ಹಿಡಿದು ಗೆಜ್ಜೆ ಕಟ್ಟುವವರೆಗೂ ಅವರವರೇ ತಮ್ಮ ಕೆಲಸಗಳನ್ನು ಮಾಡುತ್ತಾರೆ.

ಗೆಜ್ಜೆ ಕಟ್ಟುವುದನ್ನು ಕಲಿಯುವ ಮುನ್ನ ಗುರುಗಳು ಗೆಜ್ಜೆಯನ್ನು ಕಲಾವಿದರಿಗೆ ಕೊಡುತ್ತಾರೆ. ಅದನ್ನು ಪಡೆದುಕೊಳ್ಳುವ ಕಲಾವಿದರು ಪ್ರಪ್ರಥಮವಾಗಿ ದೇವರ ಮುಂದೆ ಹೋಗಿ ನಮಸ್ಕರಿಸಿ ಆ ಬಳಿಕ ಗುರುಗಳಿಗೆ ನಮಸ್ಕರಿಸುತ್ತಾರೆ. ಆ ಬಳಿಕ ಗುರುಗಳು ಕಲಾವಿದರಿಗೆ ಗೆಜ್ಜೆ ಕಟ್ಟುವುದನ್ನು ಹೇಳಿಕೊಡುತ್ತಾರೆ.

ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಚೌಕಿಯಲ್ಲಿ ಗಣೇಶನ ಭಾವಚಿತ್ರವನ್ನು ಇರಿಸಿರುತ್ತಾರೆ. ಗೆಜ್ಜೆ ಕಟ್ಟುವ ಮುನ್ನ ಕಲಾವಿದರು ಗಣೇಶನಿಗೆ ನಮಸ್ಕರಿಸಿ ನಂತರ ಗೆಜ್ಜೆ ಕಟ್ಟಿಕೊಳ್ಳುತ್ತಾರೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಎಂಟು ತಿಂಗಳುಗಳಿಂದ ಯಕ್ಷಗಾನ ಕಲಿಯುತ್ತಿರುವ ಮಕ್ಕಳಿಗೆ ಇಂದು ೨೦೨೬ ಜೂನ್‌ ೨೧ರ ಭಾನುವಾರ ಗೆಜ್ಜೆ ಕಟ್ಟುವ ಸಂಭ್ರಮ. ಯಕ್ಷ ಕಲಾ ಕೌಸ್ತುಭ ತಂಡದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರು ಮಕ್ಕಳಿಗೆ ಗೆಜ್ಜೆ ಕಟ್ಟುವ ಬಗ್ಗೆ ಕಾರ್ಯಾಗಾರವನ್ನು ನಡೆಸಿದರು.

ಸಂದರ್ಭದ ಕೆಲವು ಪಟಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಅಂದಹಾಗೆ ಯಕ್ಷಗಾನ ಕಲಿಯಲು ಇಚ್ಛಿಸುವವರಿಗಾಗಿ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡದ ಅಭ್ಯಾಸ ಮುಂದಿನ ಭಾನುವಾರ ೨೦೨೬ ಜೂನ್‌ ೨೧ರಂದು ಬೆಳಗ್ಗೆ ಆರಂಭವಾಗಲಿದೆ. 
ಆಸಕ್ತರು ಇಲ್ಲಿ ಕ್ಲಿಕ್‌ ಮಾಡಿ ನೋಡಿ 👉


Tuesday, September 22, 2026

ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ

 ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಸೆಪ್ಟೆಂಬರ್‌ ೧೮, ೧೯ ಮತ್ತು ೨೦ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ.

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ಬಡಾವಣೆಯ ೨೬ನೇ ಹಾಗೂ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಮೂರನೇ ವರ್ಷದ ಗಣೇಶೋತ್ಸವ ಸಡಗರ.

ವಿದುಷಿ ಸುಮಾ ಶ್ರೀಧರ್‌ ನೇತೃತ್ವದ ನೂಪುರ ಕಲಾನಿಕೇತನ ತಂಡದ ೪೫ ಮಂದಿ ಬಾಲ ಕಲಾವಿದೆಯರು ಅತ್ಯಾಕರ್ಷಕ ನೃತ್ಯಗಳನ್ನು ನೀಡಿ ಭಾರತದ ಸಾಂಸ್ಕೃತಿಕ ವೈಭವವನ್ನು ಉಣಬಡಿಸಿದರು.

ಬಡಾವಣೆಯ ದೇವಸ್ಥಾನದಲ್ಲೇ ಕಳೆದ ಒಂದು ವರ್ಷದಿಂದ ಯಕ್ಷಗಾನ ಅಭ್ಯಾಸ ನಿರತರಾಗಿದ್ದ ಮಕ್ಕಳು ಮತ್ತು ಅಮ್ಮಂದಿರು ʼಲವ ಕುಶ ಕಾಳಗʼ ಯಕ್ಷಗಾನವನ್ನು ಪ್ರದರ್ಶಿಸಿ ಎಲ್ಲರ ಮನ ಗೆದ್ದರು. ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭ ಬೆಂಗಳೂರುʼ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

ಹಿಮ್ಮೆಳದಲ್ಲಿ ಭಾಗವತರಾಗಿ ಉಮೇಶ್‌ ರಾಜ್‌ ಮಂದಾರ್ತಿ, ಮದ್ದಳೆ ಮತ್ತು ಚೆಂಡೆವಾದನದಲ್ಲಿ ಕ್ರಮವಾಗಿ ವೆಂಕಟೇಶ ಪ್ರಭು ಮತ್ತು ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಮನರಂಜಿಸಿದರು. ಪಾತ್ರಧಾರಿಗಳಾಗಿ ಪುಟ್ಟ ಮಕ್ಕಳಾದ ಆದ್ರಿತಾ ರೈ, ಬ್ರಿತಿ ಮತ್ತು ಕನೀರಾ ಅವರ ಬಾಲಗೋಪಾಲ ಪ್ರೇಕ್ಷಕರೆಲ್ಲದ ಮನ ಗೆದ್ದಿತು. ʼಲವಕುಶ ಕಾಳಗʼದಲ್ಲಿ ಶತ್ರುಘ್ನನಾಗಿ ಆದ್ಯಭಟ್‌, ಲವನಾಗಿ ಆಧ್ಯ ಆದ್ಯ ಶ್ರೀವಲ್ಲಿ, ಕುಶನಾಗಿ ಆದ್ಯ ಕಶ್ಯಪ್‌, ಶ್ರೀರಾಮನಾಗಿ ಡಾ. ಉಮಾದೇವಿ ಎನ್‌, ಲಕ್ಷ್ಮಿನಿಧಿಯಾಗಿ ಕಾರ್ತಿಕ್‌, ಸೀತೆಯಾಗಿ ಅರ್ಚನಾ ಬಂಗೇರ, ವಾಲ್ಮೀಕಿಯಾಗಿ ಪ್ರಣೀತಾ ರೈ, ದಮನನಾಗಿ ಶಿವಾಂಶ್‌ ವಿ ಕೆ, ಪುಷ್ಕಳನಾಗಿ ಅಭ್ಯುದಯ ಪೂಜಾ ಯಾವುದೇ ವೃತ್ತಿ ಕಲಾವಿದರಿಗೆ ಕಡಿಮೆ ಇಲ್ಲದಂತೆ ಪ್ರದರ್ಶನ ನೀಡಿ ಮನರಂಜಿಸಿದರು. ಪ್ರಸನ್ನ ಮಯ್ಯ, ವರುಣ್‌ ತೀರ್ಥಹಳ್ಳಿ, ಉದಯ ಮಂದಾರ್ತಿ ಅವರ ಮೇಕಪ್‌ ಯಕ್ಷಗಾನ ಕಲಾವಿದರ ಸೊಬಗನ್ನು ಹೆಚ್ಚಿಸಿತು.

ಮೂರನೇ ದಿನ ಬೆಂಗಳೂರಿನ ಬಾಣಸವಾಡಿಯ ಶ್ರೀ ಧರ್ಮಶಾಸ್ತಾ ವಾದ್ಯ ಕಲಾ ಕೇಂದ್ರದ ಆನಿಲ್‌ ಕುಮಾರ್‌ ಎಎಸ್‌, ಶರತ್‌ ಗೋಪಾಲ್‌, ನಿಹಾಲ್‌ ಮಣಿಕಂದನ್‌, ಪ್ರಶಾಂತ ರಾಘವನ್‌, ಸಿಜಿಮೋನ್‌ ಎಲ್‌, ಜಯಕುಮಾರ್‌ ಆರ್‌, ಅಖಿಲ್‌ ಆರ್.‌ ಆಚಾರ್ಯ, ಆದಿತ್ಯನ್‌, ಪ್ರದೀಪ ಕುಮಾರ್‌, ರತುಲ್‌, ವೈಶಾಖ್‌ ಅವರನ್ನು ಒಳಗೊಂಡ ತಂಡ ಒಂದು ಗಂಟೆಗೂ ಅಧಿಕ ಅವಧಿಯ ನಿರಂತರ ಕೇರಳ ಚೆಂಡೆವಾದನದ ಮೂಲಕ ಭಕ್ತಾದಿಗಳ ರೋಮ ನಿಮಿರಿಸಿದ್ದಲ್ಲದೆ, ಮಹಾಮಂಗಳಾರತಿ, ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ನಡೆದ ಗಣೇಶ ಶೋಭಾ ಯಾತ್ರೆಯಲ್ಲಿ (ಪುರ ಮೆರವಣಿಗೆ) ಪಾಲ್ಗೊಂಡರು ಭಕ್ತರು ತನ್ಮಯತೆಯಿಂದ ನಲಿದಾಡುವಂತೆ ಮಾಡಿದರು.

ಎಂಸಿಎಚ್‌ಎಸ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿಯ ಸದಸ್ಯೆಯರು ತಮ್ಮ ಭಜನೆಯ ಮೂಲಕ ಗಮನ ಸೆಳೆದರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಎರಡು ದಿನಗಳ ಕಾಲ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಿಜೆಪಿ ಧುರೀಣ ತಮ್ಮೇಶ್‌ ಗೌಡ ಮತ್ತು ಕಾಂಗ್ರೆಸ್‌ ಯುವ ಮುಖಂಡ ಶಿವಕುಮಾರ್‌ ಬಹುಮಾನಗಳನ್ನು ವಿತರಿಸಿದರು.

ಪುರಮೆರವಣಿಗೆಯ ಬಳಿಕ ರಾಚೇನ ಹಳ್ಳಿ ಕೆರೆಯಲ್ಲಿ ಗಣಪ ವಿಸರ್ಜನೆ ನಡೆಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟ ಹಾಗೂ ವಿಡಿಯೋ ನೋಡಲು ಚಿತ್ರಗಳನ್ನು ಕ್ಲಿಕ್‌ ಮಾಡಿರಿ.





ಈ ಸುದ್ದಿಯನ್ನೂ ಓದಿರಿ:

Wednesday, November 26, 2025

ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ

 ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ

ಬೆಂಗಳೂರಿನಲ್ಲಿ ರಾಜ್ಯೋತ್ಸವ ಅಂದರೆ ನೆನಪಾಗುವುದು  ಭಾಷಣ, ನಾಟಕ,ಸಂಗೀತ, ನೃತ್ಯ.

ಆದರೆ, ರಾಮಕೃಷ್ಣ ಹೆಗಡೆ ನಗರ, ಜಕ್ಕೂರಿಗೆ ಸಮೀಪದ ಅಮೃತಹಳ್ಳಿಯ ತಲಕಾವೇರಿ ಬಡಾವಣೆಯಲ್ಲಿ ಈ ಬಾರಿಯ ರಾಜ್ಯೋತ್ಸವ ವಿಶೇಷವಾಗಿತ್ತು. ಈ ಬಡಾವಣೆಯ ಪುಟ್ಟ ಮಕ್ಕಳು ಬಣ್ಣ ಬಣ್ಣದ ವೇಷ ತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಪೌರಾಣಿಕ ಪ್ರಸಂಗದ ಪಾತ್ರಧಾರಿಗಳಾಗಿ ಯಕ್ಷ ರಂಗಭೂಮಿಯಲ್ಲಿ ಮಿಂಚಿದರು.

ಕೇವಲ ೧೦ರಿಂದ ೧೫ದಿನಗಳ ಅವಧಿಯ ತರಬೇತಿಯಲ್ಲಿ ಯಕ್ಷಗಾನದ ಭಾಗವತಿಕೆಗೆ ಹೆಜ್ಜೆ ಹಾಕಿ ಅದ್ಭುತ ಪ್ರದರ್ಶನ ನೀಡಿದರು. ʼಅಭಿಮನ್ಯು ಕಾಳಗʼವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು.

ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರ ನಿರ್ದೇಶನ ಮತ್ತು ಅವರ ತಂಡದ ಸದಸ್ಯರ ಸಹಕಾರದೊಂದಿಗೆ ತಲಕಾವೇರಿ ಬಡಾವಣೆಯ ʼಅಭಿಮನ್ಯು ಕಾಳಗʼ ಯಕ್ಷಗಾನ ಎಲ್ಲರ ಮನ ಸೆಳೆಯಿತು.

ಉಮೇಶ ರಾಜ್‌ ಮಂದಾರ್ತಿ ಅವರು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದಾರೆ.

ʼಅಭಿಮನ್ಯು ಕಾಳಗʼ ಪ್ರದರ್ಶನಕ್ಕೆ ನಾಲ್ಕೈದು ತಾಸು ಮುಂಚಿತವಾಗಿಯೇ ರಂಗಭೂಮಿಯ ಸಮೀಪದ ʼಚೌಕಿʼಯಲ್ಲಿ ಮಕ್ಕಳು ವೇಷಭೂಷಣ ತೊಟ್ಟುಕೊಳ್ಳುತ್ತಿದ್ದ ಸಡಗರದ ಚಿತ್ರಗಳು, ಚೌಕಿ ಪೂಜೆಯ ವಿಡಿಯೋ ಸೇರಿದಂತೆ ʼಅಭಿಮನ್ಯು ಕಾಳಗʼದ ಎರಡು ಭಾಗಗಳು ಇಲ್ಲಿವೆ.

ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡುವ ಮೂಲಕ ಯಕ್ಷಗಾನ ಪ್ರಸಂಗವನ್ನು ಪೂರ್ತಿಯಾಗಿ ಇಲ್ಲಿ 👇 ವೀಕ್ಷಿಸಬಹುದು.

ಭಾಗ ೧ ಯು ಟ್ಯೂಬ್‌ ಲಿಂಕ್:‌ https://youtu.be/1LFnZpXOnlQ

ಭಾಗ ೨ ಯು ಟ್ಯೂಬ್‌ ಲಿಂಕ್‌: https://youtu.be/yl-0kIOX3HQ


ಅಥವಾ ಮೇಲಿನ ಯಕ್ಷಗಾನ ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ.
ಇನ್ನೊಂದು ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿರಿ.

Advertisement