ಆದೇಶ ಉಲ್ಲಂಘಿಸಿದರೆ ೨ ವರ್ಷ ಜೈಲು
ರಾಜ್ಯಗಳಿಗೆ ಕೇಂದ್ರ ಕಠಿಣ ಸಂದೇಶ
ನವದೆಹಲಿ: ಮಾರಕ ಕೊರೋನಾವೈರಸ್ (ಕೋವಿಡ್- ೧೯) ಹರಡುವುದನ್ನು ತಡೆಗಟ್ಟಲು ಜಾರಿಗೊಳಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಅಥವಾ ಅಧಿಕಾರಿಗಳ ಸೂಚನೆ ಉಲ್ಲಂಘಿಸಿದವರನ್ನು ಒಂದು/ ಎರಡು ವರ್ಷ ಜೈಲಿಗೆ ತಳ್ಳಿ ಎಂದು ಕೇಂದ್ರ ಸರ್ಕಾರ ಶ್ರೀವಾಸ್ತವ 2020 ಏಪ್ರಿಲ್ 02ರ ಗುರುವಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಕಠಿಣ ಸಂದೇಶ ರವಾನಿಸಿತು.
ಹಲವು ರಾಜ್ಯಗಳಲ್ಲಿ ದಿಗ್ಬಂಧನ ಉಲ್ಲಂಘಿಸಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ನಿಲುವು ತೆಗೆದುಕೊಂಡಿದೆ ಎಂದು ವರದಿ ತಿಳಿಸಿತು.
ವೈದ್ಯರು, ಆರೋಗ್ಯ ಸಿಬ್ಬಂದಿ ಅಥವಾ ಸರ್ಕಾರಿ ಅಧಿಕಾರಿಗಳ ಮೇಳೆ ಯಾರು ಹಲ್ಲೆ ನಡೆಸುತ್ತಾರೋ ಅವರನ್ನು ಜೈಲಿಗೆ ಕಳುಹಿಸಿ. ಒಂದು ವೇಳೆ ಇಂತಹ (ವೈದ್ಯರ ಮೇಲೆ ಹಲ್ಲೆ ಇನ್ನಿತರ) ಘಟನೆಯಿಂದ ಯಾರಾದರೂ ಸಾವು ನೋವಿಗೆ ಕಾರಣರಾದರೆ ಅಂತಹವರನ್ನು ಎರಡು ವರ್ಷ ಜೈಲಿಗೆ ಕಳುಹಿಸಿ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿತು.
ಯಾರು ಆದೇಶವನ್ನು ಉಲ್ಲಂಘಿಸುತ್ತಾರೋ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಯಾರು ಹಣಕ್ಕಾಗಿ ಸುಳ್ಳು ವದಂತಿ ಹಬ್ಬಿಸುತ್ತಾರೋ ಅವರನ್ನು ಕೂಡಾ ಎರಡು ವರ್ಷ ಜೈಲಿಗೆ ಕಳುಹಿಸಿ ಎಂದು ಗೌಬಾ ತಿಳಿಸಿದ್ದಾರೆ.
ಲಾಕ್ ಡೌನ್ಗೆ ಸಂಬಂಧಿಸಿದಂತೆ ಪೊಲೀಸ್, ಕೇಂದ್ರ ಅಥವಾ ರಾಜ್ಯ ಸರ್ಕಾರಿ ಅಧಿಕಾರಿಗಳು ನೀಡುವ ಆದೇಶ ಉಲ್ಲಂಘಿಸಿದರೆ ಒಂದು / ಎರಡು ವರ್ಷಗಳ ಸೆರೆವಾಸ ವಿಧಿಸಬಹುದು. ಅಗತ್ಯವಸ್ತುಗಳನ್ನು ಅಕ್ರಮವಾಗಿ ಬಚ್ಚಿಟ್ಟರೆ ೭ ವರ್ಷಗಳವರೆಗಿನ ಸೆರೆವಾಸಕ್ಕೆ ಗುರಿಯಾಗಬಹುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.
No comments:
Post a Comment