ಪ್ರಮಾಣ
ವಚನ ಸಮಾರಂಭಕ್ಕೆ ಶಿವಸೇನೆ ಸಿದ್ಧತೆ
ಶನಿವಾರ 'ಮಹಾ’ಮೈತ್ರಿ
ಸರ್ಕಾರ ಅಸ್ತಿತ್ವಕ್ಕೆ?
ನವದೆಹಲಿ/ಮುಂಬೈ:
ಮಹಾರಾಷ್ಟ್ರದಲ್ಲಿ ’ಮಹಾರಾಷ್ಟ್ರ ವಿಕಾಸ ಆಘಾದಿ’ ಎಂಬ ಹೊಸ ಹೆಸರಿನಲ್ಲಿ ಶಿವಸೇನೆ-ಎನ್ಸಿಪಿ- ಕಾಂಗ್ರೆಸ್ ಪಕ್ಷಗಳ ’ಮಹಾ ಮೈತ್ರಿ’ ಸರ್ಕಾರ ರಚನೆ ನಿಟ್ಟಿನ ಕಸರತ್ತು ಇನ್ನಷ್ಟು ವೇಗ ಪಡೆದಿದ್ದು, 2019 ನವೆಂಬರ್ 23ರ ಶನಿವಾರದ ವೇಳೆಗೆ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು 2019 ನವೆಂಬರ್ 21ರ ಗುರುವಾರ ಹೇಳಿದವು. ಶಿವಸೇನಾ
ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸೇನಾ ಶಾಸಕರನ್ನು ರಾಜಸ್ಥಾನಕ್ಕೆ ಕಳುಹಿಸಲು ಸಿದ್ಧತೆ ಆರಂಭಿಸಿದರು.
ಸೈದ್ಧಾಂತಿಕವಾಗಿ
ತನಗೆ ತದ್ವಿರುದ್ಧವಾಗಿರುವ ಶಿವಸೇನೆಯ ಜೊತೆಗೆ ಮೈತ್ರಿಯ ಅಗತ್ಯದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮನವೊಲಿಸಲಾಗಿದ್ದು, ಸರ್ಕಾರ ರಚನೆ ಬಗ್ಗೆ 2019 ನವೆಂಬರ್ 22ರ ಶುಕ್ರವಾರ ಅಂತಿಮ ನಿರ್ಧಾರ ಆಗುವ ಸಾಧ್ಯತೆಗಳಿವೆ. ಮೂರೂ ಪಕ್ಷಗಳ ಶಾಸಕರ ಬೆಂಬಲ ಪತ್ರಗಳನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ 2019 ನವೆಂಬರ್ 24ರ ಶನಿವಾರ ಸಲ್ಲಿಸುವ ಸಾಧ್ಯತೆ ಇದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಅವರು ಇಲ್ಲಿ ಹೇಳಿದರು. ಕಾಂಗ್ರೆಸ್ ಮತ್ತು ಎನ್ಸಿಪಿ ಮಧ್ಯೆ ಸರ್ಕಾರ ರಚನೆ ವಿಚಾರದಲ್ಲಿ ಒಮ್ಮತಾಭಿಪ್ರಾಯ ಮೂಡಿದೆ ಎಂದು ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ಹೇಳಿದ್ದಾರೆ.
ಮೈತ್ರಿಕೂಟ
ರಚನೆಯನ್ನು ಅಂತಿಮಗೊಳಿಸುವುದಕ್ಕಾಗಿ ಮುಂಬೈಯಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನಾಯಕರ ಜಂಟಿ ಸಭೆ ಶುಕ್ರವಾರ ನಡೆಯಲಿದ್ದು, ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್ಸಿಪಿ ನಾಯಕ ಶರದ್ ಪವಾರ್ ಅವರು ಅಧಿಕಾರ ಹಂಚಿಕೆ ಸೂತ್ರವನ್ನು ಅಂತಿಮಗೊಳಿಸುವ ಈ ಸಭೆಯಲ್ಲಿ ಪಾಲ್ಗೊಳ್ಳುವ
ನಿರೀಕ್ಷೆಯಿದೆ. ಶಿವಸೇನಾ ಶಾಸಕಾಂಗ ಪಕ್ಷದ ಸಭೆಯೂ ಇದೇ ದಿನ ನಡೆಯಲಿದೆ.
ಎಲ್ಲವೂ
ಸುಸೂತ್ರವಾಗಿ ನಡೆದರೆ, ಭಾನುವಾರ ಅಥವಾ ಸೋಮವಾರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಶಿವಸೇನಾ ಮತ್ತು ಎನ್ಸಿಪಿ ಮೂಲಗಳು ತಿಳಿಸಿದವು.
ಗುರುವಾರ
ಬೆಳಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆ ಸೇರಿತ್ತು. ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿ ಜೊತೆಗಿನ ತನ್ನ ಮೈತ್ರಿಯನ್ನು ಕೊನೆಗೊಳಿಸಿ, ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಕೋರಿದ ಬಳಿಕ ಮಹಾರಾಷ್ಟ್ರದಲ್ಲಿನ ಬದಲಾದ ಸನ್ನಿವೇಶವನ್ನು ಪರಿಗಣಿಸುವಂತೆ ಪಕ್ಷದ ನಾಯಕರು ಸೋನಿಯಾಗಾಂಧಿ ಅವರನ್ನು ಈ ಸಭೆಯಲ್ಲಿ ಒತ್ತಾಯಿಸಿದರು.
ಕೋಮುವಾದ
ವಿರುದ್ಧದ ಹೋರಾಟದಲ್ಲಿ ಪಕ್ಷದ ದೊಡ್ಡ ವಿರೋಧಿ ಬಿಜೆಪಿ ಎಂಬುದಾಗಿ ಮಹಾರಾಷ್ಟ್ರದ ಕಾಂಗ್ರೆಸ್ ಧುರೀಣರು ಪಕ್ಷಾಧ್ಯಕ್ಷೆಗೆ ಹೇಳಿದರು.
ಮಹಾರಾಷ್ಟ್ರದಲ್ಲಿ
ತ್ರಿಪಕ್ಷ ಮೈತ್ರಿಕೂಟ ಸರ್ಕಾರದ ನೇತೃತ್ವ ವಹಿಸಲು ಸಜ್ಜಾಗಿರುವ ಶಿವಸೇನೆ, ಮುಂಜಾಗರೂಕತಾ ಕ್ರಮವಾಗಿ ತನ್ನ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದು, ಆಧಾರ್, ಗುರುತಿನ ಕಾರ್ಡ್ ಮತ್ತಿತರ ದಾಖಲೆಗಳು ಮತ್ತು ಬಟ್ಟೆ ಬರೆ ಸಹಿತವಾಗಿ ಮುಂಬೈಗೆ ಬರುವಂತೆ ತನ್ನ ಶಾಸಕರಿಗೆ ಸೂಚನೆ ನೀಡಿತು.
ನೂತನ
ಮೈತ್ರಿಕೂಟವು ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡುವವರೆಗೆ ತನ್ನ ಶಾಸಕರನ್ನು ಸುರಕ್ಷಿತ ತಾಣದಲ್ಲಿ ಇರಿಸಲು ಸೇನಾ ನಾಯಕತ್ವ ಬಯಸಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.
ಸೇನೆಯು
ತನ್ನ ಶಾಸಕರನ್ನು ಗೋವಾ ಅಥವಾ ಕಾಂಗ್ರೆಸ್ ಆಡಳಿತವಿರುವ ಮಧ್ಯಪ್ರದೇಶಕ್ಕೆ ಕಳುಹಿಸುವ ಬಗ್ಗೆ ಚರ್ಚಿಸಿತು. ಆದರೆ ಕೊನೆಗೆ ರಾಜಸ್ಥಾನವನ್ನು ಆಯ್ಕೆ ಮಾಡಿಕೊಂಡಿತು. ಕಾಂಗ್ರೆಸ್ ಪಕ್ಷವು ಇದಕ್ಕೆ ಮುನ್ನ ತನ್ನ ೪೪ ಮಂದಿ ಶಾಸಕರನ್ನು
ಜೈಪುರದ ವೈಭವೋಪೇತ ರೆಸಾರ್ಟಿನಲ್ಲಿ ಇರಿಸಿತ್ತು.
ಈ
ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷವು ನಾಳೆ ಮಹಾರಾಷ್ಟ್ರ ವಿಧಾನಭವನದಲ್ಲಿ ಸಭೆ ಸೇರಿ ತನ್ನ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಪಕ್ಷ ಮೂಲಗಳು ತಿಳಿಸಿದವು.
ಈ
ಮಧ್ಯೆ ಶಿವಸೇನಾ ಶಾಸಕ ಅಬ್ದುಲ್ ಸತ್ತಾರ್ ಅವರು ತಮ್ಮ ಪಕ್ಷದ ಶಾಸಕರನ್ನು ಬೇಟೆಯಾಡಲು ಯತ್ನಿಸುವ ಯಾರೇ ವ್ಯಕ್ತಿಗಳ ತಲೆಗಳು ಉರುಳುವುವು ಎಂದು ಎಚ್ಚರಿಕೆ ನೀಡಿದರು. ಸತ್ತಾರ್ ಅವರು ಔರಂಗಾಬಾದಿನ ಸಿದ್ದೋದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಶಾಸಕರ ಬೇಟೆ ಅಥವಾ ಖರೀದಿ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಕಾನೂನು ಬದ್ಧವಲ್ಲ. ಬಿಜೆಪಿಗೆ ನಮ್ಮ ಪಕ್ಷದ ಯಾರೇ ಶಾಸಕರನ್ನೂ ಬೇಟೆಯಾಡಲು ಸಾಧ್ಯವಿಲ್ಲ. ಖರೀದಿಸಲು ಇದು ಬಿಡಿ ಮಾರಾಟದ ಅಂಗಡಿಯೂ ಅಲ್ಲ’ ಎಂದು ಹೇಳಿದರು.
ಶಿವಸೇನೆ ಜೊತೆಗೆ
ನೂತನ ಮೈತ್ರಿಕೂಟ ರಚನೆ ಮಾಡುವ ಬಗ್ಗೆ ಎನ್ ಸಿಪಿ ಜೊತೆಗಿನ ಸುದೀರ್ಘ
ಮಾತುಕತೆಯ ಬಳಿಕ ಗುರುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಎನ್ಸಿಪಿ ಮತ್ತು ಕಾಂಗ್ರೆಸ್ ನಡುವಣ ಬುಧವಾರದ ಮಾತುಕತೆಯ ವಿವರಗಳನ್ನು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ನೀಡಿದರು ಎಂದು ಸುದ್ದಿ ಮೂಲಗಳು ಹೇಳಿದವು. ಶಿವಸೇನೆ ಮತ್ತು ಎನ್ಸಿಪಿ ಜೊತೆಗೆ ಸರ್ಕಾರ ರಚನೆ ನಿಟ್ಟಿನಲ್ಲಿ ಮುಂದಡಿ ಇಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒಪ್ಪಿತು ಎಂದು ಮೂಲಗಳು ಹೇಳಿದವು.
ಮೈತ್ರಿಕೂಟಕ್ಕೆ ಅಂತಿಮ
ರೂಪ ನೀಡುವ ಸಲುವಾಗಿ ಇನ್ನೊಂದು ಸುತ್ತಿನ ಕಾಂಗ್ರೆಸ್ ಮತ್ತು ಎನ್ಸಿಪಿ ಸಭೆ ಗುರುವಾರ ರಾತ್ರಿ ನಡೆಯಲಿದ್ದು, ಶುಕ್ರವಾರ ಮುಂಬೈಯಲ್ಲಿ ಶಿವಸೇನೆ ಜೊತೆಗೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ನಿರ್ಣಯವು ಶುಕ್ರವಾರ ಮುಂಬೈಯಲ್ಲಿ ಹೊರಬೀಳಲಿದೆ ಎಂದು ಮೂಲಗಳು ಹೇಳಿದವು.
ಈ
ಮಧ್ಯೆ ನೂತನ ವಿಭಿನ್ನ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಮೈತ್ರಿಕೂಟವು ’ಜಾತ್ಯತೀತತೆ’ ಪದದ
ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಬುಧವಾರ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದ ಮಾತುಕತೆಗೆ ಮುನ್ನವೇ, ಕೋಮು ಕಾರ್ಯಸೂಚಿ ಇರುವಂತಿಲ್ಲ ಎಂದು ಕಾಂಗ್ರೆಸ್ ಹೇಳಿತು ಎನ್ನಲಾಗಿದ್ದು, ’ನೈಜವಾಗಿಯೂ ಪ್ರಗತಿಪರವಾಗಿ ಇರುವುದಾಗಿ’
ಶಿವಸೇನೆ ಭರವಸೆ ಕೊಟ್ಟಿತು ಎನ್ನಲಾಗಿದೆ.
ಕಾಂಗ್ರೆಸ್ಸಿಗೆ ನಿರುಪಮ್
ಎಚ್ಚರಿಕೆ:
ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು ’ಶಿವಸೇನೆಯ ಜೊತೆಗಿನ ಮೈತ್ರಿಯಲ್ಲಿ ರಚಿಸುವ ಸರ್ಕಾರವು ಯಾವಗಲೂ ಪಾರ್ಶ್ವವಾಯು ಪೀಡಿತವಾಗಿರಲಿದೆ’ ಎಂದು
ಎಚ್ಚರಿಸಿದ್ದಾರೆ. ’ಇಂತಹ ಮೈತ್ರಿಕೂಟದಿಂದ ದೀರ್ಘಾವಧಿಯಲ್ಲಿ ಕಾಂಗೆಸ್ ಪಕ್ಷಕ್ಕೆ ಹಾನಿಯಾಗಲಿದ್ದು, ಬೇರೆ ಪಕ್ಷಗಳಿಗೆ ಅನುಕೂಲವಾಗಲಿದೆ, ಆದ್ದರಿಂದ ಇಂತಹ ಮೈತ್ರಿಕೂಟಗಳಿಂದ ಪಕ್ಷವು ದೂರ ಇರಬೇಕು’ ಎಂದು ನಿರುಪಮ್ ಪ್ರತಿಪಾದಿಸಿದರು.
ಉತ್ತರ
ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಜೊತೆಗೆ ಮಾಡಿಕೊಂಡ ಮೈತ್ರಿಯನ್ನು ಟ್ವೀಟಿನಲ್ಲಿ ಉದಾಹರಿಸಿದ ನಿರುಪಮ್, ಮೈತ್ರಿಯ ಪರಿಣಾಮವಾಗಿ ಉತ್ತರಪ್ರದೇಶದಲ್ಲಿ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿತು ಎಂದು ಹೇಳಿದರು.
ಮುಖ್ಯಮಂತ್ರಿ ಹುದ್ದೆ
ವಿವಾದ:
ಈ ನಡುವೆ ಇನ್ನೊಂದು ವರದಿಯ ಪ್ರಕಾರ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕೆಂಬ ಎನ್ಸಿಪಿ- ಕಾಂಗ್ರೆಸ್ ಬೇಡಿಕೆ ತನಗೆ ಸಮ್ಮತವಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ ಎನ್ನಲಾಗಿದೆ. ಐದು ವರ್ಷಗಳ ಪೂರ್ಣ ಅವಧಿಗೂ ಶಿವಸೇನಾ ಮುಖ್ಯಮಂತ್ರಿಯೇ ಇರಬೇಕು ಎಂದು ಠಾಕ್ರೆ ಸೂಚಿಸಿದ್ದಾರೆ ಎಂದು ವರದಿಗಳು ಹೇಳಿವೆ. ಶಿವಸೇನೆಯು ಬಿಜೆಪಿ
ಮೈತ್ರಿಯನ್ನು ತೊರೆದು ಬಂದಿರುವುದರಿಂದ ಶಿವಸೇನೆಯೇ ೫ ವರ್ಷ ಮುಖ್ಯಮಂತ್ರಿ
ಸ್ಥಾನವನ್ನು ಹೊಂದಿರುವುದಕ್ಕೆ ತಾವು ಆದ್ಯತೆ ನೀಡುವುದಾಗಿ
ಎನ್ಸಿಪಿಯ ನವಾಬ್ ಮಲಿಕ್ ಅವರೂ ಹೇಳಿದ್ದರು.
ಮುಖ್ಯಮಂತ್ರಿ
ಸ್ಥಾನಕ್ಕೆ ಸಂಬಂಧಿಸಿದಂತೆ ೫೦-೫೦ ಸೂತ್ರ
ಇನ್ನೂ ಅಂತಿಮಗೊಂಡಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಬಾಳಾಸಾಹೇಬ್ ಥೋರಟ್ ಕೂಡಾ ಹೇಳಿದರು.
ಕಾಂಗ್ರೆಸ್
ಪಕ್ಷದ ಉನ್ನತ ಮೂಲಗಳ ಪ್ರಕಾರ ಮೈತ್ರಿಕೂಟದ ಒಪ್ಪಂದ ಬಹುತೇಕ ಅಂತಿಮಗೊಂಡಿದ್ದು, ಸಮಸ್ಯಾತ್ಮಕವಾದ ಯಾವುದೇ ವಿಷಯಗಳು ಉಳಿದಿಲ್ಲ ಎಂದು ಹೇಳಲಾಗಿದೆ.
ಹಿಂದು ಸಂಘಟನೆಗಳ
ಎಚ್ಚರಿಕೆ:
ಇದೇ ವೇಳೆಗೆ ಇನ್ನೊಂದು ಬೆಳವಣಿಗೆಯಲ್ಲಿ ಹಿಂದುತ್ವ ಸಂಘಟನೆಗಳ ಸಮೂಹವೊಂದು ಕಾಂಗ್ರೆಸ್ ಅಥವಾ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಜೊತೆಗೆ ಕೈಜೋಡಿಸುವುದರ ವಿರುದ್ಧ ಶಿವಸೇನೆ ಮತ್ತು
ಬಿಜೆಪಿಗೆ ಎಚ್ಚರಿಕೆ ನೀಡಿತು.
ಶಿವಸೇನೆ
ಅಥವಾ ಬಿಜೆಪಿ ತಮಗೆ ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಎನ್ಸಿಪಿ ಅಥವಾ ಕಾಂಗ್ರೆಸ್ ಜೊತೆಗೆ ಸರ್ಕಾರ ರಚನೆಗಾಗಿ ಕೈಜೋಡಿಸಿದರೆ ಅವುಗಳ ವಿರುದ್ಧ ಚಳವಳಿ ಆರಂಭಿಸುವುದಾಗಿ ಸಮಸ್ತ ಹಿಂದು ಆಘಾದಿ ಅಧ್ಯಕ್ಷ ಮಿಲಿಂದ್ ಎಕಬೋಟೆ ಎಚ್ಚರಿಕೆ ನೀಡಿದರು.
ಬಿಜೆಪಿ
ಮತ್ತು ಶಿವಸೇನೆ ಆದಷ್ಟೂ ಶೀಘ್ರದಲ್ಲೇ ಸರ್ಕಾರ ರಚಿಸಬೇಕು. ಅವುಗಳ ಒಳಜಗಳವು ಜನಾದೇಶಕ್ಕೆ ಮಾಡಲಾಗುತ್ತಿರುವ ಅವಮಾನ. ಸೈದ್ಧಾಂತಿಕವಾಗಿ ಭಿನ್ನವಾಗಿರುವ ಪಕ್ಷದ ಜೊತೆಗೆ ಕೈಜೋಡಿಸುವ ಶಿವಸೇನೆ ಅಥವಾ ಬಿಜೆಪಿ ಯತ್ನಗಳನ್ನು ವಿರೋಧಿಸಲು ಹಿಂದುತ್ವ ಸಂಘಟನೆಗಳು ಸಂಯುಕ್ತ ರಂಗ ರಚಿಸಲಿವೆ ಎಂದು ಎಕಬೋಟೆ ಹೇಳಿದರು.
ಸಂಪುಟಕ್ಕೆ ಯಾರು?
ಸುದ್ದಿ
ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕರಾದ ಅಶೋಕ ಚವಾಣ್, ಪೃಥ್ವೀರಾಜ್ ಚವಾಣ್, ಬಾಳಾಸಾಹೇಬ್ ಥೋರಟ್, ವಿಜಯ್ ವಾಡೆಟ್ಟಿವರ್, ಕೆಸಿ ಪಡ್ವಿ, ವಿಶ್ವವಿತ್ ಕದಮ್, ಸತೇಜ್ ಬಂಟಿ ಪಾಟೀಲ್, ಸುನಿಲ್ ಕೇಡರ್ ಮತ್ತಿತರರು ನೂತನ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಎನ್ಸಿಪಿಯಿಂದ ಜಯಂತ್ ಪಾಟೀಲ್, ನವಾಬ್ ಬಲಿಕ್, ಹಸನ್ ಮುಶ್ರಿಫ್, ಅನಿಲ್ ದೇಶಮುಖ್, ಧನಂಜಯ್ ಮುಂಡೆ, ಛಗನ್ ಭುಜಬಲ್, ಅಜಿತ್ ಪವಾರ್, ದಿಲೀಪ್ ವಸೇಲ್ ಪಾಟೀಲ್, ಮಕ್ರಾಡ್ ಪಾಟೀಲ್, ರಾಜೇಶ್ ಟೋಪೆ ಮತ್ತು ಇತರರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
No comments:
Post a Comment