Tuesday, December 3, 2019

ಪ್ರಿಯಾಂಕಾ ಗಾಂಧಿ ಮನೆಗೆ ಫೊಟೊ ಕ್ಲಿಕ್ಕಿಸಲು ನುಗ್ಗಿದ ಗುಂಪು

ಪ್ರಿಯಾಂಕಾ ಗಾಂಧಿ ಮನೆಗೆ ಫೊಟೊ ಕ್ಲಿಕ್ಕಿಸಲು ನುಗ್ಗಿದ ಗುಂಪು
ಎಸ್ಪಿಜಿ ರಕ್ಷಣೆ ರದ್ದಿನ ಬಳಿಕ ಭದ್ರತಾ ಲೋಪ
ನವದೆಹಲಿ: ವಿಶೇಷ ಭದ್ರತಾ ಗುಂಪು (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್-ಎಸ್ಪಿಜಿ) ರಕ್ಷಣೆಯನ್ನು ಕಿತ್ತು ಹಾಕಿದ ಕೆಲವೇ ವಾರಗಳ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭದ್ರತೆಯಲ್ಲಿ ಭಾರೀ ಲೋಪವಾಗಿರುವ ವಿಚಾರ ಬೆಳಕಿಗೆ ಬಂದಿದ್ದು ನವೆಂಬರ್ ೨೬ರಂದು ಕಾರೊಂದರಲ್ಲಿ ಬಂದ ಐವರು ನೇರವಾಗಿ ಅವರ ನಿವಾಸಕ್ಕೆ ನುಗ್ಗಿದ್ದರು ಎಂದು ವರದಿಯೊಂದು ತಿಳಿಸಿತು.

ಗುಂಪು ನೇರವಾಗಿ ಝಡ್-ಪ್ಲಸ್ ಭದ್ರತೆ ಹೊಂದಿರುವ ಪ್ರಿಯಾಂಕಾ ಗಾಂಧಿ ಅವರ ಬಳಿಗೆ ತೆರಳಿ ಅವರ ಫೊಟೋಗಳನ್ನು ಕ್ಲಿಕ್ ಮಾಡಿಕೊಳ್ಳುವಲ್ಲಿ ಸಮರ್ಥವಾಯಿತು ಎಂದು ಪ್ರಿಯಾಂಕಾ ಗಾಂಧಿ ಅವರು ಕಚೇರಿಯು 2019 ಡಿಸೆಂಬರ್ 02ರ ಸೋಮವಾರ ಬಹಿರಂಗ ಪಡಿಸಿತು.

ಭದ್ರತಾ ಲೋಪದ ಘಟನೆಯು ಪ್ರಿಯಾಂಕಾ ಅವರ ನಿವಾಸದ ಬಳಿಗೆ ಬರಲು ಕಾರಿಗೆ ಅನುಮತಿ ನೀಡಿದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಮತ್ತು ದೆಹಲಿ ಪೊಲೀಸರ ಮಧ್ಯೆ ಪರಸ್ಪರ ದೂಷಣೆಯ ಆಟಕ್ಕೆ ನಾಂದಿ ಹಾಡಿದೆ. ಘಟನೆಗೆ ಸಂಬಂಧಿಸಿದಂತೆ ಸಿಆರ್ಪಿಎಫ್ಗೆ ಔಪಚಾರಿಕ ದೂರನ್ನು ನೀಡಲಾಯಿತು.

ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಹೋದರ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ಜೊತೆಗೆ ನವೆಂಬರ್ ೪ರವರೆಗೆ ಎಸ್ಪಿಜಿ ರಕ್ಷಣೆಯನ್ನು ಹೊಂದಿದ್ದರು.

ಮೂರೂ ಮಂದಿ ಕಾಂಗ್ರೆಸ್ ನಾಯಕರ ಎಸ್ಪಿಜಿ ರಕ್ಷಣೆಯನ್ನು ಹಿಂತೆಗೆದುಕೊಳ್ಳಲಾಗಿದ್ದು ಅವರು ಪ್ರಸ್ತುತ ಝಡ್ ಪ್ಲಸ್ ರಕ್ಷಣೆಯನ್ನು ಹೊಂದಿದ್ದಾರೆ.

ಝಡ್-ಪ್ಲಸ್ ರಕ್ಷಣೆಯ ಅಡಿಯಲ್ಲಿ ಕುಟುಂಬಕ್ಕೆ ಅವರ ಮನೆಗಳಲ್ಲಿ ಮತ್ತು ದೇಶದಲ್ಲಿ ಎಲ್ಲೇ ಪ್ರಯಾಸ ಮಾಡಿದರೂ ಆಗ ಗಾರ್ಡ್ಗಳ ಜೊತೆಗೆ ಅತ್ಯಂತ ಸಮೀಪದಿಂದಲೇ ಸಿಆರ್ಪಿಎಫ್ ಅರೆ ಸೇನಾ ಪಡೆಗಳ ಕಮಾಂಡೋ ರಕ್ಷಣೆ ಇರುತ್ತದೆ.

ಎಸ್ಪಿಜಿ ರಕ್ಷಣೆ ಹೊಂದಿರುವವರಿಗೆ ಅವರ ಮೋಟಾರು ವಾಹನಗಳ ಸಾಲಿನಲ್ಲೇ ಗಾರ್ಡ್ಗಳು, ಹೈ-ಟೆಕ್ ವಾಹನಗಳು, ಜಾಮ್ಮರ್ಗಳು ಮತ್ತು  ಆಂಬುಲೆನ್ಸ್ ಸೇವೆ ಸದಾ ಇರುತ್ತದೆ. ಪ್ರಸ್ತುತ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರವೇ ವಿಶೇಷ ಭದ್ರತೆ ಲಭ್ಯವಿದೆ.

೧೯೮೮ರಲ್ಲಿ ಜಾರಿಗೊಳಿಸಲಾದ ಎಸ್ಪಿಜಿ ಕಾಯ್ದೆಯನ್ನು ಮೊದಲಿಗೆ ಪ್ರಧಾನಿ ಮತ್ತು ರಾಷ್ಟ್ರದ ಮಾಜಿ ಪ್ರಧಾನಿಗಳಿಗೆ ಮಾತ್ರವೇ ವಿಶೇಷ ಭದ್ರತೆ ಒದಗಿಸುವ ಸಲುವಾಗಿ ರೂಪಿಸಲಾಗಿತ್ತು.

ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ಮಾಜಿ ಪ್ರಧಾನಿಗಳ ಸಮೀಪ ಸಂಬಂಧಿಗಳನ್ನು ಎಸ್ಪಿಜಿ ಭದ್ರತೆ ಹೊಂದಿರುವವರ ಪಟ್ಟಿಗೆ ಸೇರ್ಪಡೆ ಮಾಡಲು ಸಾಧ್ಯವಾಗುವಂತೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ತನ್ಮೂಲಕ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಿಗೂ ಎಸ್ಪಿಜಿ ರಕ್ಷಣೆಗೆ ಒದಗಿಸಲು ಮಾರ್ಗ ಸುಗಮವಾಗಿತ್ತು.

೧೯೮೪ರ ಅಕ್ಟೋಬರ್ ೩೧ರಂದು ಅಂಗರಕ್ಷಕರಿಂದಲೇ ಇಂದಿರಾ ಗಾಂಧಿ ಅವರ ಹತ್ಯೆ ಸಂಭವಿಸಿದ ಬಳಿಕ ದೇಶದ ಪ್ರಧಾನಿಯ ಭದ್ರತೆಗೆ ಪ್ರತ್ಯೇಕ ಪಡೆಯನ್ನು ರಚಿಸುವ ಅಗತ್ಯವನ್ನು ಮನಗಾಣಲಾಗಿತ್ತು.

No comments:

Advertisement